ಪಿರಿಯಾಪಟ್ಟಣ		
ಭಾರತದ ಕರ್ನಾಟಕ ರಾಜ್ಯದ ಮೈಸೂರು ಜಿಲ್ಲೆಯ ಒಂದು ತಾಲ್ಲೂಕು; ತಾಲ್ಲೂಕಿನ ಆಡಳಿತ ಕೇಂದ್ರ. ಕೊಡಗು ಜಿಲ್ಲೆಯ ವೀರರಾಜೇಂದ್ರಪೇಟೆ ಮತ್ತು ಸೋಮವಾರಪೇಟೆ, ಹಾಸನ ಜಿಲ್ಲೆಯ ಅರಕಲಗೂಡು, ಮತ್ತು ಮೈಸೂರು ಜಿಲ್ಲೆಯ ಕೃಷ್ಣರಾಜನಗರ ಮತ್ತು ಮೈಸೂರು ತಾಲ್ಲೂಕಗಳು ಈ ತಾಲ್ಲೂಕನ್ನು ಬಳಸಿವೆ. ತಾಲ್ಲೂಕಿನ ವಿಸ್ತೀರ್ಣ 814.5 ಚ.ಕಿ.ಮೀ. ಜನಸಂಖ್ಯೆ 2,24,022 (2001). ಪಿರಿಯಾಪಟ್ಟಣ, ಹಾರನಹಳ್ಳಿ, ಬೆಟ್ಟದಪುರ ಮತ್ತು ರಾವಂದೂರು ಹೋಬಳಿಗಳಿಂದ ಕೂಡಿರುವ ಈ ತಾಲ್ಲೂಕಿನಲ್ಲಿ 201 ಗ್ರಾಮಗಳಿವೆ. ತಾಲ್ಲೂಕಿನ ಪಶ್ಚಿಮ ಮತ್ತು ವಾಯುವ್ಯ ಗಡಿಯಲ್ಲಿ ಹರಿಯುವ ಕಾವೇರಿ ನದಿ ಇದನ್ನು ಸೋಮವಾರಪೇಟೆ ತಾಲ್ಲೂಕಿನಿಂದ ಪ್ರತ್ಯೇಕಿಸುತ್ತದೆ. ಪಶ್ಚಿಮ ಘಟ್ಟಗಳ ಬುಡದಲ್ಲಿ ಹಬ್ಬಿರುವ ಪಿರಿಯಾಪಟ್ಟಣ ತಾಲ್ಲೂಕು ಸ್ಥೂಲವಾಗಿ ಪೂರ್ವದ ಕಡೆಗೆ ಇಳಿಜಾರಾಗಿದೆ. ಪಶ್ಚಿಮ ಭಾಗದಲ್ಲಿ ಮಾಕಲಯ್ಯನ ಬೆಟ್ಟ ಮತ್ತು ಜೇನುಕಲ್ಲು ಬೆಟ್ಟ ಇವೆ. ತಾಲ್ಲೂಕಿನ ವಾರ್ಷಿಕ ಸರಾಸರಿ ಮಳೆ 874.19 ಮಿ.ಮೀ. ಹೊಗೆಸೊಪ್ಪು, ಹತ್ತಿ, ಅಡಕೆ ಇವು ತಾಲ್ಲೂಕಿನ ಮುಖ್ಯ ಬೆಳೆಗಳು. ರಾಗಿ-ಜೋಳಗಳೂ ಬೆಳೆಯುತ್ತವೆ. ಪಿರಿಯಾಪಟ್ಟಣ-ಹಾಸನ ರಸ್ತೆಯಲ್ಲಿ ಪಿರಿಯಾಪಟ್ಟಣದಿಂದ ವಾಯುವ್ಯಕ್ಕೆ 16 ಕಿ.ಮೀ. ದೂತದಲ್ಲಿರುವ ಬೆಟ್ಟದಪುರ ಒಂದು ಮುಖ್ಯ ಸ್ಥಳ. ಇಲ್ಲಿಯ ಬೆಟ್ಟದ ಎತ್ತರ ಸಮುದ್ರ ಮಟ್ಟದಿಂದ 1,338 ಮೀ. ಇದರ ಮೇಲೆ ಸಿಡಿಲು ಮಲ್ಲಿಕಾರ್ಜುನನ ದೇವಾಲಯವಿದೆ. ಪಿರಿಯಾಪಟ್ಟಣ ತಾಲ್ಲೂಕಿನಲ್ಲಿರುವ ಬೈಲುಕುಪ್ಪೆಯಲ್ಲಿ ಟಿಬೆಟ್ಟಿನ ನಿರಾಶ್ರಿತರಿಗೆ ವಸತಿಯನ್ನು ಕಲ್ಪಿಸಲಾಗಿದೆ.

	ತಾಲ್ಲೂಕಿನ ಆಡಳಿತ ಕೇಂದ್ರ ಪಿರಿಯಾಪಟ್ಟಣ. ಮೈಸೂರು-ಮಡಿಕೇರಿ ಹೆದ್ದಾರಿಯ ಮೇಲಿರುವ ಈ ಪಟ್ಟಣ ಮೈಸೂರಿನಿಂದ ಪಶ್ಚಿಮಕ್ಕೆ ಸುಮಾರು 67 ಕಿ.ಮೀ. ಮತ್ತು ಹುಣಸೂರಿನಿಂದ ಪಶ್ಚಿಮಕ್ಕೆ ಸುಮಾರು 20 ಕಿ.ಮೀ. ದೂರದದಲ್ಲಿದೆ. ಜನಸಂಖ್ಯೆ 14,922 (2001). ಹಿಂದೆ ಇದಕ್ಕೆ ಸಿಂಗಪಟ್ಟಣ ಎಂಬ ಹಸರಿತ್ತು. ಅಗಸ್ತ್ಯ ಇಲ್ಲಿಗೆ ಬಂದಿದ್ದನೆಂಬುದು ಸ್ಥಳಪುರಾಣ. ಚಂಗಾಳ್ವರ ಆಳ್ವಿಕೆಯ ಕಾಲದಲ್ಲಿ ಇದು ಪ್ರಾಮುಖ್ಯ ಗಳಿಸಿತ್ತು. ಚಂಗಾಳ್ವರ ದೊರೆ ಪಿರಿಯರಾಜ (ಅ.1586-89) ಇಲ್ಲಿ ತನ್ನ ತಂದೆ ಕಟ್ಟಿಸಿದ್ದ ಮಣ್ಣಿನ ಕೋಟೆಯನ್ನು ಕೆಡವಿಸಿ ಕಲ್ಲಿನ ಕೋಟೆಯನ್ನು ಕಟ್ಟಿಸಿದ್ದನೆಂದು ಪಿರಿಯಾಪಟ್ಟಣ ಎಂಬ ಹೆಸರು ಬಂದದ್ದು ಇವನಿಂದಲೇ ಎಂದು ಹೇಳಲಾಗಿದೆ. ಸುಮಾರು 1625 ರಲ್ಲಿ ಮೈಸೂರಿನ ದೊರೆ ಕಂಠೀರವ ನರಸರಾಜ ಇದನ್ನು ವಶಪಡಿಸಿಕೊಂಡ. ಆಗ ವೀರರಾಜನಿಗೂ ಮೈಸೂರಿನ ದೊರೆಗೂ ನಡೆದ ಕದನವನ್ನು ಪಿರಿಯಾಪಟ್ಟಣದ ಕಾಳಗ ಎಂಬ ಜನಪದ ಕಾವೈ ವರ್ಣಿಸುತ್ತದೆ. ಬ್ರಿಟಿಷರು ಕೊಡಗಿನ ಮೇಲೆ ದಾಳಿ ಮಾಡಲು ಬಂದಾಗ ಅವರಿಗೆ ಏನೂ ಸಿಗದಂತೆ ಮಾಡಲು ಇಲ್ಲಿ ಕೋಟೆಯನ್ನೂ ಕೆಲವು ಕಟ್ಟಡಗಳನ್ನೂ ಕೆಡವಲಾಯಿತು. ಟಿಪ್ಪುವಿನ ಸೈನ್ಯಕ್ಕೂ ಕೊಡಗಿನ ಸೈನ್ಯಕ್ಕೂ ಪಿರಿಯಾಪಟ್ಟಣದಲ್ಲಿ ಕದನ ನಡೆದಿತ್ತು. 

	ಪಿರಿಯಾಪಟ್ಟಣದಲ್ಲಿ ಪಿರಿಯಾಪಟ್ಟಣದಮ್ಮ, ಕನ್ನಂಬಾಡಿಯಮ್ಮ, ಕೋಟೆ ಮಾರಿ, ಆಂಜನೇಯ, ವೈದ್ಯೇಶ್ವರ, ಚನ್ನಕೇಶವ, ಮಾದೇಶ್ವರ ಮತ್ತು ವೆಂಕಟೇಶ್ವರ ದೇವಸ್ಥಾನಗಳಿವೆ. ಶಾಲೆ ಕಾಲೇಜುಗಳು, ಆಸ್ಪತ್ರೆ ಪುರಸಭೆಗಳೂ ಇವೆ. ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತದೆ. ಶನಿವಾರ ಸಂತೆ ಕೂಡುತ್ತದೆ. 									(ಪಿ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ